ಹಾಸನಾಂಬ ದೇವಾಲಯ ಕುರಿತು

ಹಾಸನಾಂಬ ದೇವಾಲಯ

‘ಜನನೀ ಜನ್ಮ ಭೂಮಿಶ್ಟ ಸ್ವರ್ಗಾದಪಿ ಗರೀಯಸಿ’, ಸುಭಾಷಿತ ನಿತ್ಯ ಸತ್ಯ ದೇವಾನು ದೇವತೆಗಳಿಂದಲೂ ಮಾತೃದೇವತೆಗೆ ಸರ್ವಶ್ರೇಷ್ಠ ಸ್ಥಾನಮಾನವಿದೆ. ಈ ಭರತ ಭೂಮಿಯಲ್ಲಿ ಜನಿಸಿರುವ ನಾವೆಲ್ಲರೂ ಧನ್ಯರು. ನಮ್ಮ ಈ ಸುಂದರ ಕರ್ನಾಟಕವು ದೇಶ ವಿದೇಶಗಳಲ್ಲಿ ಪ್ರಸಿದ್ದಿ ಹೊಂದಿದ್ದು ಶಿಲ್ಪಕಲೆಯ ತವರೂರು ಎನಿಸಿದ್ದು ಸುಂದರ ಕೆತ್ತೆನೆಗಳು ಪ್ರವಾಸಿಗರನ್ನು ಹಾಗೂ ಕಲಾರಸಿಕರನ್ನು ಆಕರ್ಷಿಸುತ್ತವೆ. ಈ ದೇವಾಲಯಗಳ ಕೇಂದ್ರ ಬಿಂದುವಾದ ಹಾಸನ ನಗರದಲ್ಲಿ ನೆಲೆಸಿರುವ ಹಾಸನಾಂಬೆಯ ದೇವಿಯ ದರ್ಶನ ಮಾಡಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂಬುದು ಪ್ರತಿಯೊಬ್ಬರ ಮಹದಾಸೆ. ಸುಮಾರು 12ನೇ ಶತಮಾನದಲ್ಲಿ ಕೃಷ್ಣಪ್ಪನಾಯಕ ಮತ್ತು ಸಂಜೀವನಾಯಕ ಎಂಬ ಪಾಳೆಗಾರರ ಕಾಲದ್ದಲ್ಲಿ ಸ್ಥಾಪಿತವಾಗಿರುವ ಈ ದೇವಾಲಯವು ಇತರ ದೇವಾನುದೇವತೆಗಳ ಕೆತ್ತನೆಯಲ್ಲಿ ಹಾಸನಾಂಬ ದೇವಿಯ ಹುತ್ತದಲ್ಲಿ ನೆಲೆಸಿರುವ ನೋಟವನ್ನು ಇಲ್ಲಿ ಕಾಣಬಹುದು. ಮೊದಲು ಸಿಂಹಾಸನಪುರಿ ಎಂದು ಕರೆಯಲಾಗುತ್ತಿದ್ದ ಊರಿನಲ್ಲಿ ಹಾಸನಾಂಬೆ ನೆಲೆಯಾಗಿದ್ದರಿಂದ ಹಾಸನ ಎಂಬ ಹೆಸರು ಬಂದಿದೆ.

Hasanamba Temple Devigere Kalyani 2
ದೇವಿಗೆರೆ ಕಲ್ಯಾಣಿ
Hasanamba Temple Devigere Kalyani 1
ದೇವಿಗೆರೆ ಕಲ್ಯಾಣಿ

ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ

ಸಪ್ತ ಮಾತೃಕೆಯರು ವಾರಣಾಸಿಯಿಂದ (ಕಾಶಿ) ದಕ್ಷಿಣಕ್ಕೆ ವಾಯುವಿಹಾರಾರ್ಥವಾಗಿ ಬಂದರೆಂದೂ, ಆ ಸಪ್ತ ಮಾತೃಕೆಯರೆಂದರೆ, ಬ್ರಾಹ್ಮೀದೇವಿ, ಮಹೇಶ್ಷರಿ, ಕೌಮಾರಿ, ವೈಷ್ಣವಿ, ವಾರಾಹಿ, ಮತ್ತು ಚಾಮುಂಡಿ ಕೌಮಾರಿ ದೇವಿಯರು ಈ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರೆಂದೂ, ಬ್ರಾಹ್ಮಿದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದರೆಂದೂ, ಚಾಮುಂಡಿ, ವಾರಾಹಿ, ಇಂದ್ರಾಣಿಯರು ನಗರದ ಮಧ್ಯಭಾಗದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿರುವರೆಂದೂ ಪ್ರತೀತಿಯಂತೆ ತಿಳಿದುಬಂದಿದೆ. ವರ್ಷಕ್ಕೊಮ್ಮೆ ದೇವಿಯರ ದರ್ಶನವಿದ್ದು ಹಾಸನಾಂಬೆ ದೇವಿಯನ್ನು ಭಕ್ತರು ಎಲ್ಲಾ ಸಮಯದ್ಲಲೂ ದರ್ಶನ ಮಾಡಲು ಸಾಧ್ಯವಿಲ್ಲ. ವರ್ಷಕ್ಕೊಂದು ಸಾರಿ ಆಶ್ವಯಜ ಮಾಸ ಪೊರ್ಣಿಮೆ ನಂತರ ಬರುವ ಗುರುವಾರದಂದು ಬಾಗಿಲು ತೆರೆದರೆ ಅನಂತರ ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚುವುದು, ಪುನಃ ಒಂದು ವರ್ಷದ ಕಾಲ ದೇವಿಯರ ದರ್ಶನ ಸಿಗುವುದಿಲ್ಲ. ಹಾಸನಾಂಬ ದೇವಿಯ ವಿಶೇಷವೆಂದರೆ ನಂಬಿದ ಭಕ್ತರ ಹರಕೆಗಳನ್ನು ತಿರಿಸುವುದು ಹಾಗೂ ಅವರ ಜೀವನದಲ್ಲಿ ಹೊಸಬೆಳಕು ನೀಡಿ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವುದು. ಇದರಿಂದಾಗಿಯೇ ರಾಜ್ಯ ಮತ್ತು ಹೊರರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಬಂದು ದರ್ಶನ ಪಡೆದು ಪಾವನರಾಗುತ್ತಿದ್ದಾರೆ.
ಹಾಸನಾಂಬ ದೇವಿಯ ಬಾಗಿಲು ತೆಗೆಯುವ ಸಮಯ ಬಂದಿತೆಂದರೆ ಜಿಲ್ಲೆಯ ಎಲ್ಲಾ ಮೂಲೆ ಮೂಲೆಗಳಿಂದಲೂ ಭಕ್ತಾದಿಗಳು ದೇವಿಯ ದರ್ಶನಕ್ಕೋಸ್ಕರ ಸಾಲುಸಾಲಾಗಿ ನಿಂತು ದರ್ಶನ ಮಾಡುವ ನೋಟವು ಜಾತ್ರೆಯಂತೆ ಕಾಣುತ್ತದೆ. ಬಾಗಿಲು ತೆಗೆಯುವ ದಿವಸ ಹಾಸನದಲ್ಲಿರುವ ಎಲ್ಲಾ ತಳವಾರ ಮನೆತನದವರು ದೇವಿಯ ಗರ್ಭಗುಡಿಯ ಎದುರಿಗೆ ಬಾಳೆಕಂದನ್ನು ನೆಟ್ಟು ಹಾಸನಾಂಬೆಯನ್ನು ಭಕ್ತಿಯಿಂದ ಭಾಜೆಸುತ್ತಾ ಬಾಳೆಕಂದನ್ನು ಕತ್ತರಿಸಿದ ನಂತರವೇ ದೇವಿಯ ಬಾಗಿಲನ್ನು ತೆಗೆಯುವ ಪ್ರತೀತಿ ಮೊದಲಿನಿಂದಲೂ ರೂಡಿಯಲ್ಲಿದೆ. ಈ ದೃಶ್ಯವನ್ನು ನೋಡಲು ಸಾವಿರಾರು ಭಾಕ್ತಾದಿಗಳು ಕಾಡು ಕುಳಿತಿರುತ್ತಾರೆ, ಮೊದಲು ಈ ಊರಿಗೆ ಸಿಂಹಾಸನಪುರಿ ಎಂದು ಹೆಸರಿದ್ದು, ಹಾಸನಾಂಬೆ ದೇವಿಯು ನೆಲೆಸಿದ ನಂತರ ಹಾಸನ ಎಂದು ಬಂದಿತೆಂದು ತಿಳಿದುಬರುತ್ತದೆ.

ಹಾಸನಾಂಬೆಯ ನೆಲೆ-ಹಿನ್ನೆಲೆ

ಪ್ರಕೃತಿಯ ವರ ಪಡೆದು, ಸಂಸ್ಕೃತಿಯ, ಸಾರವುಂಡು, ಧೀರೋದಾತ್ತ ಗುಣವನ್ನು ಮೆರೆಸಿ, ಸರ್ವಾನುಮತ ಸಮನ್ವಯ ತತ್ವವನ್ನು ಅನುಷ್ಠಾನದಲ್ಲಿ ತಂದುಕೊಂಡು ನಾಡಿಗೆ ಮಾದರಿಯಾದ ಚಕ್ರಾಧಿಪತ್ಯವನ್ನು ಭರಿಸಿ ಮೆರೆದ ಪಣ್ಯ ಭೂಮಿ ಹಾಸನ ಜಿಲ್ಲೆ, ಈ ಹಾಸನ ಜಿಲ್ಲಿಯ ಆಡಳಿತದ ಕೇಂದ್ರ ಹಾಸನ ನಗರ. ಈ ಹಾಸನದ ಅಭಿಮಾನದ ಅನುಪಮ ಪ್ರಭಾವದ ಶಕ್ತಿದೇವತೆ. ಗ್ರಾಮದೇವತೆ ಶ್ರೀ ಹಾಸನಾಂಬೆ, ಈಕೆಯನ್ನು ಹಾಸನಮ್ಮ, ಹಾಸನದಮ್ಮ, ಸಪ್ತಮಾತೃಕೆಯರೆಂದು ಅನನ್ಯ ಭಕ್ತಿಯಿಂದ ಆರಾದಿಸುವುದು ಪರಿಪಾಟವಾಗಿದೆ.
ಅಮ್ಮ ಎನ್ನುವ ಮಾತು ಮನುಷ್ಯನ ಬಾಯಿಂದ ಮೊದಲು ಬಂದ ಮಾತು. ಅದಕ್ಕಾಗಿ ಮಾತೃದೇವೋಭವ ಎಂದರು ನಮ್ಮ ಹಿರಿಯರು. ಅಮ್ಮ ನಮ್ಮ ಇರುವಿಗೆ ಕಾರಣವಾಗಿ ನಮ್ಮ ನೆಮ್ಮದಿಗೆ ನೆರವಾಗುವ ತಾಯಿ ಎಂದು ಇದರ ಅರ್ಥ. ಮೂರ್ತಿ ಕಲ್ಪನೆ ಒದಗಿದ ಕಾಲದಲ್ಲಿ ಪುರಾಣ ಮೈದಳೆದ ಕಾಲದಲ್ಲಿ ಈ ಅಮ್ಮನ ಎರಡೂ ಮುಖಗಳಿಗೆ ರೂಪ ಸಿದ್ದವಾಯಿತು. ಹಲವಾರು ವಿವರಗಳನ್ನು ಸೂಚಿಸುವಂತೆ ಹತ್ತಾರು ಕೈಗಳು, ಕಪಾಲ, ಶೂಲ, ಖಡ್ಗ, ಅಂಕುಶಗಳು ಬಂದವು. ವರದ ಅಭಯ ಪುಷ್ಪ, ಅನ್ನ ಪಾತ್ರೆಗಳೂ ಬಂದವು.
ಮುಖದಲ್ಲಿ ಮಂದಹಾಸವು ಮೂಡಿತು, ಉರಿನಾಲಿಗೆ, ಕೋರೆದವಡೆಗಳೂ ಕೆಂಗಣ್ಣುಗಳು ಕಾಣಿಸಿಕೊಂಡವು ಸುಖಾಸನದಲ್ಲಿ ಅನ್ನಪೂರ್ಣೆಯಾಗಿ, ರಾಜರಾಜೇಶ್ವರಿಯಾಗಿ ಕೂತವಳು ಅವಳೇ ಸಿಟ್ಟಿನಿಂದ ಶಿವನ ಮೈಮೇಲೆ ಕುಣಿಯುತ್ತಾ, ಬೆತ್ತೆಲೆಯಾಗಿ ಅಟ್ಟಹಾಸದಿಂದ ಕತ್ತಿಹಿಡಿದು ನಿಂತವಳೂ ಅವಳೆ. ಸಿಂಹದ ಮೇಲೇರಿ ಅಸುರರನ್ನು ಕೊಲ್ಲುತ್ತಾ ಉಗ್ರವಾಗಿಯೂ, ಸೌಮ್ಯವಾಗಿಯೂ ತೋರಿಕೊಂಡವಳೂ ಅವಳೇ. ತನ್ನತಲೆಯನ್ನು ಕಡಿದುಕೊಂಡು ಕುತ್ತಿಗೆಯಿಂದ ಚಿಮ್ಮುವ ರಕ್ತವನ್ನು ಡಾಕಿನಿಯರಿಗೆ ಕುಡಿಸುತ್ತಿರುವ ಭಿನ್ನ ಮಸ್ತಾದೇವಿಯೂ ಅವಳೆ.
ಅವಳು ಮಾತೃಸ್ವರೂಪಿಣಿ, ತಾರಿಣಿ, ಸಂಹಾರಿಣಿ, ಇವೆಲ್ಲ ಶಕ್ತಿಯ ಬೇರೆ ಬೇರೆ ವಿವರಗಳು. ಬಿಳಿ ಬಣ್ಣದ ಗೌರಿಯಾಗಲೀ, ಕಡುಕಪ್ಪಿನ ಕಾಳಿಯಾಗಲೀ, ಚೆಲುವೆಯಾದ ಮೋಹಿನಿಯಾಗಲೀ, ಬೆದರಿಸುವ ಪ್ರತ್ಯಂಗಿರೆಯಾಗಲೀ, ಕರುಳನ್ನೇ ಕುಯ್ಯುವ ಕಂಕಾಳಿಯಾಗಲೀ, ಹಿರಿಹಿಗ್ಗಿಸುವ ಲಲಿತೆಯಾಗಲೀ ಬಡಿದು ಬಗ್ಗಿಸುವ ಚಾಮುಂಡಿಯಾಗಲೀ, ಆ ಶಕ್ತಿಯೆದುರು ನಿಂತು ಸೆಣೆಸಿ ಗೆಲ್ಲಬಲ್ಲ ಗಂಡುತನ ಮನುಷ್ಯನಿಗೆ ಕಾಣಲಿಲ್ಲ. ಶ್ರಾವಣ ಸಂಪ್ರದಾಯದ ಪ್ರಭಾವದಿಂದ ಸನ್ಯಾಸಿನಿಯ ಮನೋವೃತ್ತಿ ಬಲಗೊಂಡಾಗ ಹೆಣ್ಣು, ಹೊನ್ನು, ಮಣ್ಣು ಈ ಮೂರನ್ನು ಬಿಟ್ಟುಬಿಡಬೇಕು ಎನ್ನುವ ಉಪದೇಶ ಸಿದ್ದವಾಯಿತು ಬಿಟ್ಟವರು ಯಾರೋ ದೇವರೇ ಬಲ್ಲ. ಹೆಣ್ಣಿನಿಂದಲೇ ಇಹವು, ಹೆಣ್ಣಿಂದಲೇ ಪರವೂ, ಹೆಣ್ಣಿನಿಂದಲೇ ಸಂಪದವು. ಹೆಣ್ಣನ್ನೊಲ್ಲದ ಅಣ್ಣಗಳಾರು? ಸರ್ವಜ್ಞನ ಪ್ರಶ್ನೆಗೆ ಉತ್ತರಿಸುವವರ್ಯಾರು?
ದೇವಿಯ ಆರಾಧನೆ ನಡೆಯುವ ಕೆಲವು ಸ್ಥಳಗಳು, ಕಾಂಚಿಪುರ (ಕಂಚಿ ಕಾಮಾಕ್ಷಿ) ಕಾಶಿ (ವಿಶಾಲಾಕ್ಷಿ) ಮಧುರೈ (ಮೀನಾಕ್ಷಿ) ತುಳಜಾಪುರ (ತುಳಜಾ ಭವಾನಿ), ಶೃಗೇರಿ (ಶಾರದೆ), ಮಂಗಳೂರು (ಮಂಗಳಾದೇವಿ), ಕೊಲ್ಲೂರು (ಮೂಕಾಂಬಿಕೆ), ಉತ್ತರ ಕರ್ನಾಟಕದ ಸವದತ್ತಿ (ಎಲ್ಲಮ್ಮ), ಕೇರಳದ (ಭಗವತೀ) ಬಂಗಾಲದ (ದುರ್ಗಿ), ಹಾಸನದ (ಹಾಸನಾಂಬೆ).

ಹಿಂದೂ ದೇವಗಣದಲ್ಲಿ ಸಪ್ತ ಮಾತೃಕೆಯರಿಗೊಂದು ವಿಶಿಷ್ಠ ಸ್ಥಾನವಿದೆ. ಭಾರತದಾದ್ಯಂತ ಕಂಡುಬರುವ ಸಪ್ತಮಾತೃಕೆಯರ ಅಸಂಖ್ಯಾತ ಶಿಲ್ಪಗಳು ಈ ದೇವತೆಗಳ ಆರಾಧನೆಯ ಜನಪ್ರಿಯತೆಗೆ ಸಾಕ್ಷಿ. ಸಂಸ್ಕೃತ ಶ್ಲೋಕವೊಂದು ಸಪ್ತಮಾತೃಕೆಯರನ್ನು ಈ ರೀತಿ ಮಾಡುತ್ತದೆ. ಬ್ರಾಹ್ಮಿ ಮಾಹೇಶ್ವರಿ ಚೈವ, ಕೌಮಾರಿ ವೈಷ್ಣವೀ ತಥಾ, ಮಾಹೇಂದ್ರಿ ಚೈವ ವಾರಾಹೀ, ಚಾಮುಂಡಾ ಸಪ್ತ ಮಾತರ:
ಶಿಲ್ಪದಲ್ಲಿ ಸಪ್ತಮಾತೃಕೆಯರನ್ನು ಒಂದೇ ಫಲದಲ್ಲಿ ಸಾಲಾಗಿ ಅಥವಾ ಏಳು ಬೇರೆ ಬೇರೆ ಮೂರ್ತಿಗಳಾಗಿ ಕಡೆದಿರುವುದು ವಾಡಿಕೆ. ಆಗ ಅವರ ಕ್ರಮ ಸಾಮಾನ್ಯವಾಗಿ ಬ್ರಾಹ್ಮೀ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ (ಮಾಹೇಂದ್ರಿ) ಹಾಗೂ ಚಾಮುಂಡಿ, ಬ್ರಾಹ್ಮಿಯ ಬಲಭಾಗದಲ್ಲಿ ವೀರಭದ್ರನನ್ನೂ, ಚಾಮುಂಡಿಯ ಎಡಭಾಗದಲ್ಲಿ ಗಣೇಶನನ್ನೂ ಇರಿಸಿ ನಡುವೆ ಮಾತೃಗಣಗಳನ್ನಾರಿಸಬೇಕೆಂದು ವಿಧಿಯಿದೆ. ದೇವತೆಗಳ ಶಕ್ತಿಯರಾದ ಇವರು ಸಂಬಂಧ ಪಟ್ಟ ಪುರುಷರು ದೇವತೆಗಳಂತೆಯೇ ಆಯೋಧ, ಆಭರಣ, ವಾಹನ ಹಾಗೂ ಸಂಕೇತಗಳನ್ನು ಹೊಂದಿರುವುದು ಪದ್ಧತಿ. ಬ್ರಾಹ್ಮಿಯು ಬ್ರಹ್ಮನಂತೆ, ಮಹೇಶ್ವರಿ ಶಿವನಂತೆ, ಕೌಮಾರಿ ಸ್ಕಂದನಂತೆ ಇತ್ಯಾದಿ ಹೊಯ್ಸಳರ ಕಾಲದ ಸಪ್ತಮಾತೃಕೆಯರ ವಿಗ್ರಹಗಳು. ಮೈತುಂಬ ಆಭರಣಗಳೂ, ಸುಂದರವಾದ ಕಿರೀಟ ಮಂದಹಾಸ ಪೂರ್ಣಮುಖ ಮುದ್ರೆಗಳಿಂದ ಸುಮಬಾ ಆಕರ್ಷಣೀಯವಾದವು. ಈ ಪೈಕಿ ಹಾಸನದ ಸಮೀಪ ಇರುವ ಕೋರಮಂಗಲ, ಬೇಲೂರು, ಹಳೇಬೀಡು, ನುಗ್ಗೇಹಳ್ಳಿಗಳಲ್ಲಿ ಕಂಡುಬರುವ ಸಪ್ತಮಾತೃಕೆಯರ ಶಿಲ್ಪಗಳು ವಿಶೇಷವಾಗಿ ಹೆಸರಿಸುವಂತಹವುಗಳಾಗೆವೆ. ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ದಕ್ಷಿಣ ಮಹಾದ್ವಾರದ ಮಾತೃಕೆಯರ ಶಿಲ್ಪಗಳಂತೂ ಅತ್ಯಂತ ಸುಂದರವಾದವು. ಶೈವ ದೇವಾಲಯಗಳಲ್ಲಿ ಸಪ್ತಮಾತೃಕೆಯರು ಮಗುವನ್ನು ಹಿಡಿಸುಕೊಂಡಿರುವಂತೆ ಚಿತ್ರಿಸಲಾಗಿರುವುದು ಗಮನಾರ್ಹ. ಇದು ಮಾತೃತ್ವದ ಸಂಕೇತ. ಮಗುವನ್ನು ಹಿಡಿದುಕೊಂಡ ಸಪ್ತಮಾತೃಕೆಯರ ವಿಗ್ರಹಗಳು ಎಲ್ಲೋರದ ಗುಹಾಂತರ ದೇವಾಲಯಗಳಲ್ಲೂ ಕಂಡುಬಂದಿದೆ. ವಿಜಯನಗರದ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದರೆನ್ನಲಾದ ವಿದ್ಯಾರಣ್ಯರ ಪಾದಸ್ಪರ್ಶದಿಂದ ಪವಿತ್ರವನ್ನಾಗಿರಿಸಿದ ತಾಲ್ಲೂಕು ಹಾಸನ. ಹೊಯ್ಸಳರ ಕಾಲದ ವಿರೂಪಾಕ್ಷೇಶ್ವರ ದೇವಾಯವನ್ನೂ ಹಾಸನದಲ್ಲಿ ವಿದ್ಯಾರಣ್ಯರು ಜೀರ್ಣೋದ್ಧಾರ ಮಾಡಿದರೆಂದು ಪ್ರತೀತಿ.
ಹಾಸನಾನೆಂಬೆ ಹೆಸರು ಸಿಂಹಾಸನಪುರಿ ಎಂಬ ಹೆಸರಿನಿಂದ ಬಂದಿದೆ ಎಂದು ತಿಳಿಯಲಾಗಿದೆ. ಸಿಂಹಾಸನಪುರ ಅರ್ಜುನನ ಮುಮ್ಮೊಗ ಜನಮೇಜಯ ಮಹಾರಾಜನ ಸ್ಥಳವಾಗಿತ್ತೆಂದು ಹೇಳುತ್ತಾರೆ.
ಇನ್ನೊಂದು ಕಥೆಯ ಪ್ರಕಾರ ಸಪ್ತಮಾತೃಕೆಯರು ವಾರಣಾಸಿಯಿಂದ ದಕ್ಷಿಣಭಾರತದತ್ತ ಬರುತ್ತಿರುವಾಗ ಈ ಪ್ರದೇಶದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಇಲ್ಲೇ ನೆಲೆಸಲು ನಿರ್ಧರಿಸಿ ಅವರಲ್ಲಿ ಆರು ಮಂದಿ ಹಾಸನದಲ್ಲಿಯೂ, ಮತ್ತೊಬ್ಬಾಕೆ ಕೆಂಚಾಬಾದೇವಿ ಎಂಬ ಹೆಸರಿನಿಂದ ಕೆಂಚಮ್ಮನ ಹೊಸಕೋಟೆ ಎಂಬಲ್ಲಿ ನೆಲೆಗೊಂಡಳೆಂದು ಹೇಳಲಾಗಿದೆ.
ಹಾಸನಮ್ಮ ಎಂದರೆ ನಸುನಗುವ ತಾಯಿ ಎಂಬರ್ಥದಲ್ಲಿ ಹಾಸನಾಂಬ ಮೂರ್ತಿ ಹುತ್ತದ ಆಕಾರದಲ್ಲಿರುವುದು ವೈಶಿಷ್ಟ್ಯ ಈಕೆಯ ದರ್ಶನ ವರ್ಷದಲ್ಲಿ ಒಂದು ಸಾರಿ, ಅದೂ ಆಶ್ವಯುಜ ಮಾಸದ ಕೃಷ್ಣ ಪಕ್ಷ ಗುರುವಾರದಿಂದ ಶುಕ್ಲ ಕಾರ್ತಿಕ ಪಾಡ್ಯಮಿಯಲ್ಲಿ ಎನ್ನುವುದು ಮಹಾರಹಸ್ಯ ಒಡೆಯಲಾರದ ಒಗಟಾಗಿದೆ.

ಸೊಸೆಕಲ್ಲು - ಕಲಿಗಾಲದ ಅಂತ್ಯದ ಕುರುಹು

ಪ್ರತಿನಿತ್ಯ ದೇವಿಯ ದರ್ಶನ ಮಾಡಲು ಬರುತ್ತಿದ್ದ ಸೊಸೆಗೆ ಕಿರುಕುಳ ಕೊಡುತ್ತಿದ್ದ ಅತ್ತೆಯು ಒಂದು ದಿನ ಸೊಸೆಯನ್ನು ಹಿಂಬಾಲಿಸಿದಾಗ ಮನೆಯಿಂದ ನೇರವಾಗಿ ಬಂದು ದೇವಿಯ ಮುಂದೆ ನಿಂತು ದೇವಿಯ ಧ್ಯಾನದಲ್ಲಿ ಮಗ್ನಳಾಗಿದ್ದ ಸೊಸೆಯನ್ನು ಕಂಡು ಸಿಟ್ಟಿನಿಂದ ಮನೆಯ ಕೆಲಸ ಕರ್ಯಗಳಿಗಿಂತ ದೇವಿಯ ದರ್ಶನ ನಿನಗೆ ಹೆಚ್ಚಾಯಿತೇ ಎಂದು ದೇವಿಯ ಮುಂಭಾಗದಲ್ಲಿದ್ದ ಚಂದ್ರ ಬಟ್ಟಲನ್ನು ತೆಗೆದುಕೊಂಡು ತಲೆಯ ಮೇಲೆ ಕುಕ್ಕಿದ್ದರಿಂದ ನೋವನ್ನು ತಾಳಲಾರದೆ ಸೊಸೆಯು ಅಮ್ಮಾ ಹಾಸನಾಂಬೆ ಎಂದು ಭಕ್ತಿಯಿಂದ ಕೂಗಿದಾಗ, ಭಕ್ತಳ ಕಷ್ಟವನ್ನು ನೋಡಲಾರದೆ ದೇವಿಯು ಅವಳ ಭಕ್ತಿಗೆ ಮೆಚ್ಚಿ ತನ್ನ ಸನ್ನಿಧಿಯಲ್ಲಿ ಯಾವಾಗಲೂ ಎದುರಿಗೆ ಕಾಣುವಂತಿರು ಎಂದು ಹರಿಸಿದ್ದರಿಂದ ಸೊಸೆಯು ಕಲ್ಲಾಗಿ ನೆಲೆಸಿದಳೆಂದೂ, ಪ್ರತೀ ವರ್ಷವೂ ಒಂದು ಭತ್ತದ ಕಾಳಿನ ತುದಿಯಷ್ಟು ದೇವಿಯ ಕಡೆ ಚಲಿಸುವಳೆಂದೂ, ಪಾದ ತಲುಪದ ಕ್ಷಣದಲ್ಲೇ ಕಲಿಯುಗದ ಅಂತ್ಯ ಎನ್ನುವ ವಾಡಿಕೆ ಮೊದಲಿನಿಂದಲೂ ಸಹ ಬಂದಿದೆ. ಅತ್ತೆಮನೆ ಸೊಸೆ ಕಲ್ಲಾಗಿ ನೆಲೆಸಿರುವ ಈ ದೃಶ್ಯವನ್ನು ಈಗಲೂ ಕಣ್ಣಾರೆ ಕಾಣಬಹುದು.

ಕಳ್ಳಪ್ಪನ ಗುಡಿ

ದೇವಿಯ ಮೇಲಿರುವ ಆಭರಣಗಳನ್ನು ಅಪಹರಿಸಲೆಂದು ನಾಲ್ಕು ಮಂದಿ ಕಳ್ಳರು ಒಳಪ್ರವೇಶಿಸಿ, ಆಭರಣಗಳನ್ನು ತೆಗೆಯಲು ಹೋದಾಗ ಕುಪಿತಳಾದ ದೇವಿಯು ಶಾಪಕೊಟ್ಟಾಗ ಆ ನಾಲ್ಕು ಮಂದಿ ಕಳ್ಳರು ಕಲ್ಲಾಗಿದ್ದು, ಇಂದಿಗೂ ಇವುಗಳನ್ನು ಕಾಣಬಹುದು. ಈ ಗುಡಿಯನ್ನು ಕಳ್ಳಪ್ಪನ ಗುಡಿ ಎಂದು ಕರೆಯುತ್ತಾರೆ.

ಸಿದ್ದೇಶ್ವರ ದೇವಾಲಯ

ಹಾಸನಾಂಬೆಯ ದೇವಾಲಯದ ದ್ವಾರದಿಂದ ಒಳಪ್ರವೇಶಿಸಿದ ತಕ್ಷಣವೇ ಮೊದಲು ನೋಡಬಹುದಾದ ಸಿದ್ದೇಶ್ವರ ಸ್ವಾಮಿಯ ದೇವಾಲಯವು ಸುಂದರ ರೂಪದಲ್ಲಿದೆ. ಈ ದೇವಾಲಯದಲ್ಲಿ ಸಿದ್ದೇಶ್ವರ ಸ್ವಾಮಿಯನ್ನು ಲಿಂಗರೂಪದಲ್ಲಿ ಅಲ್ಲದೇ ಉದ್ಭವ ಮೂರ್ತಿಯು ಅರ್ಜುನನಿಗೆ ಈಶ್ವರನು ಪಾಶುಪತಾಸ್ತ್ರ ಕೊಡುವ ಆಕಾರದಲ್ಲಿದೆ. ಉದ್ಭವ ಮೂರ್ತಿಯ ಹಣೆಯ ಮೇಲೆ ಜಿನುಗುವ ರೂಪದಲ್ಲಿ ಪ್ರತಿ ವರ್ಷವೂ ವಿಶೇಷವಾಗಿ ಪ್ರತಿ ನಿತ್ಯವೂ ನೋಡಬಹುದಾಗಿದೆ.
ಪ್ರತೀ ವರ್ಷವೂ ಈ ದೇವಾಲಯದ ಉತ್ಸವ ಮೂರ್ತಿಯು ಅಮಾವಾಸ್ಯೆಯಂದು ರಾವಣೋತ್ಸವ ಬಲಿಪಾಡ್ಯಮಿ ಚಂದ್ರಮಂಡಲ ರಥೋತ್ಸವವು ಬಹಳ ವಿಜೃಂಬಣೆಯಿಂದ ನಡೆಯುತ್ತದೆ.

Close Menu